ಕನ್ನಡ ರಂಗಭೂಮಿಯಲ್ಲಿ ಮೊಟ್ಟ ಮೊದಲ ಬಾರಿಗೆ ಹೊಸದೊಂದು ಪ್ರಯೋಗ ಮಾಡಿದ ಹೆಮ್ಮೆ ಇದೆ. ಅದೇನೆಂದಿರಾ ಅದೇ ” ಒಂದು ನಿಮಿಷದ ಸಿಗ್ನಲ್ ನಾಟಕ “.
ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಾಗ ಯಾವಾಗ ಹಸಿರ ನಿಶಾನೆ ಬರುವುದೊ ಎಂದು ಹಪಹಪಿಸುತ್ತದೆ ಎಲ್ಲರ ಮನಸ್ಸು. ಅಂತಹ ಸಮಯದಲ್ಲಿ ಪೆಡೆಸ್ಟ್ರಿಯನ್ ಕ್ರಾಸಿಂಗ್ ನಲ್ಲಿ ಏನಾದರೂ ಸಂಭವಿಸಿದರೆ ಎಲ್ಲಿ ಟ್ರಾಫಿಕ್ ಜಾಮ್ ಆಗುವುದೊ ಎಂದು ತವಕಿಸುತ್ತಾರೆ ವಾಹನ ಸವಾರರು . ಇಂಥ ಸನ್ನಿವೇಶದಲ್ಲಿ ತಮಟೆ ಹೊಡೆದು ನಾಟಕ ನಾಟಕ ಎಂದು ಕೂಗುತ್ತ ನಟವರ್ಗ ಪ್ರವೇಶಿಸಿದರೆ ಏನಾಗಬಹುದು?
ಕೆಂಪು ದೀಪ ಹಸಿರು ದೀಪವಾಗುವವರೆಗೂ ಕಾಯುತ್ತಾರೆ . ಇನ್ನು ಮೂರು ಸೆಕೆಂಡು ಇದೆ ಎನ್ನುವಾಗ ಹಾರನ್ನು ಹೊಡೆಯುವರು . ಇದು ಸಹಜವಾಗಿ ರೂಢಿಯಲ್ಲಿರುವ ವಾಹನ ಚಾಲಕರ ಮನಸ್ಥಿತಿ .
ಆದರೆ ಇಂಥಾ ಮನಸ್ಸುಗಳು ನಾಟಕ ಶುರುವಾದಾಗ “ಏನಪ್ಪ ಎಷ್ಟು ಹೊತ್ತು ಆಗಬಹುದೋ?” ಎಂದು ಆತಂಕಪಟ್ಟದ್ದು ಸಹಜ. ಆಮೇಲೆ ನಾಟಕ ನೋಡಿ ಒಂದು ನಿಮಿಷಕ್ಕೆ ಮುಗಿಯಿತು ಎಂದಾಗ “ಆಗಿಹೋಯ್ತಾ?” ಎಂದು ನಗುತ್ತಾ, thumbs up ಮಾಡುತ್ತ, good job ಅಂತಲೋ, super ಅಂತಲೋ ಹೇಳಿ ಹೊರಟಾಗ ಸಾರ್ಥಕ ಭಾವ. ಆ ತವಕ ತಳಮಳ ತುಂಬಿದ ಮನಸ್ಸುಗಳಿಗೆ ಒಂದೇ ಒಂದು ನಿಮಿಷದ ಆಹ್ಲಾದ.
2
2017 ರ ಕೊನೆಯ ದಿನವಾದ ಡಿಸೆಂಬರ್ 31 ರಂದು ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ಹಿರಿಯರ ವಿಭಾಗದ ಪಾಂಶುಪಾಲರಾದ ಎಸ್. ವಿ . ಸುಷ್ಮಾಅವರ ಮಾರ್ಗದರ್ಶನದಲ್ಲಿ ನಡೆದ ಈ ಬೀದಿ ನಾಟಕೋತ್ಸವದಲ್ಲಿ 240 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡುವುದರ ಮೂಲಕ ಕನ್ನಡ ರಂಗಭೂಮಿಯಲ್ಲಿಯೆ ಹೊಸ ದಾಖಲೆ ಸೃಷ್ಟಿಸಿದೆ. ಈ ಬೀದಿ ನಾಟಕೋತ್ಸವ ಹಿರಿಯರ ವಿಭಾಗದ 5 ವರ್ಷದ ಸಂಭ್ರಮ ಮತ್ತು ಕೇಂದ್ರದ ಸಂಸ್ಥಾಪಕರಾದ ಬೀದಿ ನಾಟಕಗಳ ಭೀಷ್ಮ ದಿ. ಎ.ಎಸ್.ಮೂರ್ತಿ ಯವರ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
Leave a Reply